Saturday, 2 February 2013

ಮನಸಿಲ್ದ ಮದವಿಯ ಮಾಡ್ಯಾರೋ ಗೆಳೆಯ...

ಹೆ.  ಮನಸಿಲ್ದ ಮದವಿಯ ಮಾಡ್ಯಾರೋ ಗೆಳೆಯ
      ಬಿಟ್ಟು ನಿನ್ನ ನಡಬರಕ
      ನೀನಿಲ್ದ ಬದುಕು ನನಗಿಲ್ಲೋ ಒಡೆಯ
      ಆಗು ನನ್ನ ಹಣೆಬರಕ||

ಗ.  ಮಾಯದ ಗಾಯ ಮಾಡ್ಯೊಂಟಿ ಗೆಳತಿ
      ನೀನಿಲ್ದ ಬರೆ ನರಕ
      ಮತ್ಯಾಕ  ಒಳ್ಳಿ ಬಂದಿದಿ ನನ್ನ
      ಹೊಟ್ಟಿಯ ಹುರುಸಾಕ||

ಹೆ.  ಕೈಕಾಲು ಬಿದ್ದರು ಬಿಡಲಿಲ್ಲ ಗೆಳೆಯ
      ನಾ ನಿನ್ನ ನೋಡಲಾಕ
      ಕಂಬಕ್ಕೆ ಕಟ್ಟ್ಯಾಕಿ ಬಡಿದಾರೋ ನನ್ನ
      ಬರವಲ್ದು ನಡಿಲಾಕ
      ಮನಕ ಬಂದಂಗ ಬಡಿವಾಗ ಯಾರು
      ಬಂದಿಲ್ಲ ಬಿಡಸಾಕ||
      ಸೊನ್ನಿ ಮುಚ್ಚಿ ಬಿದ್ದರು ಸಾಯ್ಲೆಂತ ಹೇಳಿ
      ಬರಲಿಲ್ಲ ಎಬಸಾಕ
      ಯಾರಿಗೆ ಹೇಳಲಿ ನನ ದುಃಖ..

ಗ.  ಸುಳ್ಳ ಸುಳ್ಳ ಹೇಳಿದ್ರ ಮಳ್ಳಲ್ಲ ನಾನು
     ನೀನ್ನ ಮಾತು ಕೇಳಲಾಕ
     ಕಥಿಮಾಡಿ ಹೇಳಿದ್ರು ಆಗವಲ್ದ ಗೆಳತಿ
     ನಿನ್ನ ಮಾತು ನಂಬಲಾಕ
     ಹುರುಪಿಲೆ ತೈಯ್ಯಾರ ಆಗಿದಿ ಗಂಡನ
     ಮನಿಗಿ ಹೋಗಲಾಕ||
     ಹೋಗುದುರೊಳಗ ಮುಚ್ಚೋಗು ನೀನು
     ನನ್ನನ್ನು ಮಣ್ಣಾಗ
     ಸುಖಪಡು ಗಂಡನ ಮನಿಯಾಗ..

ಹೆ. ಚುಚ್ಚಿ ಚುಚ್ಚಿ ನನ್ನ ಕೊಲ್ಲತಿ ಯಾಕೋ
     ನೋಡು ನೀ ನನ್ನ ಮೈನಾ
     ಮೈಯಲ್ಲ ಬಾಸುಂಡಿ ಬಂದಾವ ಗೆಳೆಯ
     ಸಿಗಲ್ಲದು ಕೂನಾ
     ನಿನ್ನ ಬಿಟ್ಟು ಹೋಗಲಾರದೆ ಬಂದಿನಿ ನನ್ನ ಕೈಯ
     ಬಿಡಬ್ಯಾಡೋ ನೀನಾ||
     ಇದ್ದರೆ ನಿನ್ನ ಜೋತೆ ಇರತಿನಿ ಗೆಳೆಯ
     ಹೋಗದಿಲ್ಲ ನಾ ಇನ್ನ
     ಇಲ್ಲಂದ್ರ ಸಾಯಿಸಿ ಬಿಡು ನನ್ನ..

ಗ. ಕಟ್ಟಿದ ತಾಳಿಯ ತಗದೊಗಿಯ ಗೆಳತಿ
    ಸಾಯ್ಸಿಲಿ ನೀನಗ್ಯಾಕ
    ಯಾರ್ಯಾರು ಅಡ್ಡ ಬರತಾರ ಬರಲಿ
    ಸಿಳತಿನಿ ನಡಕ
    ಹಸಿರು ಬಳಿಯ ತಂದಿನಿ ಗೆಳತಿ
    ನಾ ನೀನಗ ತೊಡಸಾಕ||
    ನಾನು ನೀನು ಜೋಡ ಆಗುನು
    ಯಾರಿಂದ ಆಗದಿಲ್ಲ  ಬಿಡಸಾಕ
    ಅದರ ಅಂಜೀಕಿ ನೀನಗ್ಯಾಕ...

                                                ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ

No comments:

Post a Comment